ಶ್ರುತಿ: ನನ್ನ ಹೆಸರು ಶ್ರುತಿ. ನನ್ನ ಅಂದವನ್ನು ನೋಡಿ ಕಾಲೇಜಿನಲ್ಲಿ ಹುಡುಗರು ಬಾರ್ಬಿ ಎಂದು ನಿಕ್ ನೇಮ್ ಕೊಟ್ಟಿದ್ದಾರೆ. ಕಳೆದ ವರ್ಷದವರೆಗೆ ಕಾಲೇಜಿಗೆ ಬಂದು ಹೋಗುವುದು ಹಾಗೂ ಪುಸ್ತಕಗಳೇ ಎಲ್ಲವೂ ಆಗಿದ್ದವು. ಆದರೆ ಈಗ ನಾನು ಪ್ರಜ್ವಲ್ ಎನ್ನುವವರನ್ನು ಪ್ರೀತಿಸ್ತಾ ಇದೀನಿ. ನಿಮಗೇ ಗೊತ್ತು ಪ್ರೀತೀಲಿ ಬಿದ್ದ ಮೇಲೆ (ಅಥವಾ ಸೆಳೆತ, ಹಾರ್ಮೋನುಗಳ ನಡುವಿನ ಯುದ್ದ) ನಿಮಗೆ ಅವರನ್ನು ಬಿಟ್ಟು ಬೇರೆ ಏನೂ ಬೇಡ ಅಂತ ಅನ್ಸುತ್ತೆ. ಅವರೂ ನಿಮ್ಮನ್ನು ಅಷ್ಟೇ ಪ್ರೀತಿಯಿಂದ ಕಾಳಜಿ ಮಾಡಿದರೆ, ನಾವೇ ಈ ವಿಶ್ವದಲ್ಲಿ ಅತ್ಯಂತ ಶ್ರೀಮಂತರು. ಆದ್ರೆ..
ಶಿಲ್ಪಾ: Hi, ನನ್ನ ಹೆಸರು ಶಿಲ್ಪಾ. ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ನನ್ನನ್ನ ಎಲ್ಲರೂ ಪ್ರೀತಿಯಿಂದ ಶಿಲ್ಪಿ ಅಂತ ಕರೀತಾರೆ. ತಂದೆ -ತಾಯಿ ಇಲ್ಲದ ನನಗೆ ಹಾಸ್ಟೆಲ್ ಹಾಗೂ ಸ್ನೇಹಿತರೆ ಎಲ್ಲಾ ಅಂತಿದ್ದ ಸಮಯದಲ್ಲಿ ಕಂಡಿದ್ದು ಪ್ರಜ್ವಲ್. ಈಗ ನಾನು ಅವರನ್ನು ಒಂದು ದಿನವೂ ನೋಡದೆ ಇರಲಾರೆ ಎಂದು ಅನ್ನಿಸುತ್ತಿದೆ.
ಪ್ರಜ್ವಲ್: ಹಲೋ, ನನ್ನ ಹೆಸರು ಪ್ರಜ್ವಲ್. ನಾನು ಒಂದು ಇಂಜಿನಿಯರಿಂಗ್ ಕಾಲೇಜಲ್ಲಿ ಕೆಲ್ಸ ಮಾಡ್ತ ಇದೀನಿ. ನಾನು ಶ್ರುತಿ ಎನ್ನುವವಳನ್ನು ಇಷ್ಟ ಪಡ್ತಾ ಇದೀನಿ. ಅವಳು ತುಂಬಾ ಒಳ್ಳೆ ಹುಡುಗಿ. ಅವಳು ನನ್ನ ಕಾಲೇಜಲ್ಲೇ ಓದ್ತಾ ಇದ್ರು ನಾನು ಅವಳಿಗೆ ಯಾವುದೇ subject ಟೀಚ್ ಮಾಡ್ತ ಇಲ್ಲ. ಅವಳದ್ದು ಇನ್ಫೋರ್ಮೇಷನ್ ಸೈನ್ಸ್ ಸ್ಟ್ರೀಮ್. ನಾನು ಎಲೆಕ್ಟ್ರಾನಿಕ್ಸ್ ಲೆಕ್ಟರರ್. ಸೋ ಅವಳನ್ನ ನಾನು ನೋಡೆ ಇರ್ಲಿಲ್ಲ. But, ಒಂದು ದಿನ ಒಂದು ಮಡಚಿಟ್ಟಿದ್ದ ಕಾಗದ ಸ್ಟಾಫ್ ರೂಮಲ್ಲಿ ನನ್ನ ಟೇಬಲ್ ಮೇಲಿತ್ತು... ಶ್ರುತಿಯಿಂದ love ಲೆಟರ್…!
ಶ್ರುತಿ: ನಾನು ಇಂದು ಪ್ರಜ್ವಲ್ ಎಂಬುವವರನ್ನು ನೋಡ್ದೆ. ಅವರು ಕ್ಯಾಂಟಿನಿನಲ್ಲಿ ಟೀಯೊಂದಿಗೆ snacks ತಿಂತಾ ಇದ್ರು, ನಾನು ಅಲ್ಲಿಗೆ ಎಂಟ್ರೀ ಕೊಟ್ಟಾಗ. ಅವ್ರು ನನ್ನ ನೋಡ್ಲಿಲ್ಲ. ನನ್ ಫ್ರೆಂಡ್ ಪ್ರತಿಮಾ ಹತ್ರ ಕೇಳಿದೆ ಆ ಹುಡುಗ ಹೆಂಗೆ ಅಂತ. ಅವ್ಳು ಹೇಳಿದ್ಲು ಹುಡುಗ ಅಲ್ಲ, ಲೆಕ್ಟರರ್ ಅವ್ರು. ವಿದ್ಯಾರ್ಥಿ ಆಗಿ ನೀನು ಅವ್ರನ್ನ ಆ ದೃಷ್ಟಿಲಿ ನೋಡದು ತಪ್ಪು ಅಂತ ಸೇರಿಸಿ ಹೇಳಿದ್ಲು. ಅದಕ್ಕೆ ನಾನು ಹೇಳಿದ್ದೆ - ಅವ್ರೇನ್ ನಮ್ಗೆ ಕ್ಲಾಸ್ ತಗೊಂಡಿಲ್ಲ. ಸೊ ಐ ಕ್ಯಾನ್. ನನ್ ಮಾತನ್ನ ಕಾಮಿಡಿ ಅಂತ ತಿಳ್ಕೊಂಡು ಅವ್ಳು ನಕ್ಕಿದ್ದು, ನಾನು ಇನ್ನೂ ಸೀರೀಯಸ್ ಆಗುವಂತೆ ಮಾಡ್ತು.
ಶಿಲ್ಪಾ: ಹಾಸ್ಟೆಲ್ ಗೆ ಬಂದ್ಮೇಲೆ ಪ್ರತಿಮಾ ನನಗೆ ಆ ಜೋಕ್ ಹೇಳಿದಳು. ನಾನು ನಂಬಲಿಲ್ಲ. ಆದ್ರೆ ನಾನೂ ಸುಂದರವಾಗೇ ಇದ್ದೀನಿ ಎಂಬ ಸೊಕ್ಕು ಇದ್ದಿದ್ರಿಂದ ಅವ್ಳಿಗೆ ನಾನು ಕಾಂಪಿಟಿಷನ್ ಕೊಡ್ಬೇಕು, ನಾನು ಪ್ರಜ್ವಲ್ ನ ಬಿಡ್‌ಬಾರ್ದು ಅಂತ ಅನ್ಕೊಂಡೆ. ನಾವಿಬ್ರೂ ಬೇರೆ ಬೇರೆ ಸ್ಟ್ರೀಮ್ ಅಲ್ಲಿ ಓದ್ತಾ ಇದ್ರೂ ಕೂಡ ಹಾಸ್ಟೆಲ್ ಅಲ್ಲಿ ನಮ್ಮಿಬ್ರಿಗೂ ಕಂಪೇರ್ ಮಾಡ್ತ ಇದ್ರು. ನಾನು ಇದಕ್ಕೂ ಮೊದ್ಲೇ ಅವ್ರನ್ನ ನೋಡಿದ್ರೂ ಏನು ಅನ್ನಿಸಿರ್ಲಿಲ್ಲ. ಆದ್ರೆ ಈಗ ಇವ್ಳಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಬೇಕು ಎನ್ನುವ ಹುಂಬತನ ನನ್ನನ್ನು ಅವ್ರ ಕಡೆ ಇನ್ನಷ್ಟು ಸೆಳೆಯಿತು. ನನಗೇ ತಿಳಿಯದೇ ಮತ್ತೆ ಹಿಂದಕ್ಕೆ ಬರಲಾರದಷ್ಟು ಮುಂದೆ ಹೋಗಿಬಿಟ್ಟೆ.
ಪ್ರಜ್ವಲ್: ನನಗೆ ಶ್ರುತಿ ಅಂದ್ರೆ ಯಾರು ಅಂತ ಗೊತ್ತಿಲ್ಲ. ಆದ್ರೆ ನನಗೆ ಶಿಲ್ಪಾ ಅನ್ನೋ ಹುಡುಗಿ ಗೊತ್ತು. ಅವಳು ತುಂಬಾ ಅಂದಗಾತಿ. ಅನಾಥೆ ಆಗಿದ್ರಿಂದ ಅವಳ ಮೇಲೆ ಕನಿಕರ ನನಗೆ ಇತ್ತು. ಅವ್ಳು ಯಾವಾಗ್ಲೂ ನನ್ನ ಹಿಂದೆ ಸುತ್ತುತ್ತಾ ಇರ್ತಾಳೆ. ಕಾರಣ ಇಲ್ಲದೆ ಡೌಟು ಕೇಳ್ಕೊಂಡು ಪುಸ್ತಕ ಹಿಡ್ಕೊಂಡು ಬರ್ತಿರ್ತಾಳೆ. ಹುಚ್ಚು ಹುಡ್ಗಿ ಅಷ್ಟೇ. ಆದ್ರೆ ನಾನು ಅವ್ಳನ್ನು ಯಾವಾಗ್ಲೂ ವಿದ್ಯಾರ್ಥಿನಿ ಅಂತಾನೆ ನೋಡಿದ್ದು. ಬೇರೆ ಯಾವುದೇ ಭಾವನೆಗಳಿಗೆ ಆಸ್ಪದ ಇರ್ಲಿಲ್ಲ.
ಶ್ರುತಿ: ನಾನು ಅವ್ರಿಗೆ ಲೆಟರ್ ಕಳಿಸಿ ಮೂರು ದಿನ ಆಯ್ತು. ಅವ್ರುaಏನು ರೆಸ್ಪಾಂಡ್ ಮಾಡೆ ಇಲ್ಲ. ಶಿಲ್ಪಾ ಕೂಡ ಅವ್ರಿಗೆ ಲೈನ್ ಹೊಡಿತಿದಾಳೆ ಅಂತ ಪ್ರತಿಮಾ ಹೇಳಿದ್ಲು. ಆ ಈಡಿಯಟ್ ಗೆ ಯಾವ್ದೇ ಹಕ್ಕು ಇಲ್ಲ. ಅವ್ಳು ನನ್ನ ವಿಷ್ಯದಲ್ಲಿ ಯಾವಾಗ್ಲೂ ಮಧ್ಯೆ ಪ್ರವೇಶ ಮಾಡ್ತಾನೆ ಇರ್ತಾಳೆ. ಬರೀ ಓದಿನಲ್ಲಿ ಇವಳು ಪ್ರತಿಸ್ಪರ್ಧಿ ಅಂತ ಅಂದ್ಕೊಂಡಿದ್ದ ನನಗೆ ಹುಡುಗನ ವಿಷಯದಲ್ಲೂ ಎದುರಾಳಿಯಂತೆ ಅಡ್ಡ ಬಂದದ್ದು ಸಹಿಸಲಾಗ್ಲಿಲ್ಲ. ಅವ್ಳಿಗೆ ಬೇರೆ ಯಾರೂ ಸಿಗ್ಲಿಲ್ವಾ? ನನ್ ಹುಡ್ಗಾ ನೇ ಬೇಕಿತ್ತಾ? ಟೈಂ ಬಂದಾಗ ಅವ್ಳಿಗೆ ಬುದ್ದಿ ಕಲಿಸ್ತೀನಿ. ಆದ್ರೆ ಅದಕ್ಕೂ ಮೊದ್ಲು, ಪ್ರಜ್ವಲ್ ರನ್ನ ನನ್ನ ಗ್ರಿಪ್ ಗೆ ತಂದುಕೊಳ್ಬೇಕು. ಶಿಲ್ಪಾ ಈ ಲವ್ ಕಾಂಪಿಟಿಷನ್ ಅಲ್ಲಿ ಸೋಲೋದನ್ನ ನಾನು ನೋಡ್ಲೆ ಬೇಕು.
ಶಿಲ್ಪಾ: ನನ್ನ ಲುಕ್, ಸ್ಮೇಲ್ ಗೆ ಪ್ರಜ್ವಲ್ ನನ್ ಕಡೆ ಬಂದಿದ್ದಾರೆ. ಅವ್ರನ್ನ ೯೦% ಪಡೆದುಕೊಂಡೆ ಅಂದೆ ಅನ್ಸುತ್ತೆ. ಶ್ರುತಿಯ ಆ ಬಡಪಾಯಿ ಲವ್ ಲೆಟರ್ ಏನೂ ಕೆಲ್ಸ ಮಾಡೆ ಇಲ್ಲ. ಅವ್ಳನ್ನ ಇವ್ರು ನೋಡಿಲ್ಲ. ಅವ್ಳನ್ನ ನೋಡಿದ್ರೆ ೧೦೦% ಅವ್ಳ ಕಡೆ ಅಟ್ರ್ಯಾಕ್ಟ್ ಆಗೇ ಆಗ್ತಾರೆ. ಆಮೇಲೆ ನಾನು ಅವ್ರನ್ನ ಗೆಲ್ಲೋದು ಕನಸಿನ ಮಾತು. ಶ್ರುತಿನ ಇವ್ರ ಎದಿರು ಬರದಂತೆ ನೋಡ್ಕೋ ಅಂತ ದೇವ್ರ ಹತ್ರ ಪ್ರಾರ್ಥಿಸ್ತೀನಿ.
ಪ್ರಜ್ವಲ್: ಶ್ರುತಿ ಅಪ್ಸರೆಯಂತೆ ಇದ್ದಾಳೆ ಅಂತ ನನಗೆ ಗೊತ್ತಿರ್ಲಿಲ್ಲ. ಪ್ರತಿಮಾ ಬಳಿ ಅವಳ ಬಗ್ಗೆ ಕೇಳಿ ತಿಳಿದುಕೊಂಡೆ. ಏನು ಮಾಡಬೇಕೆಂದು ನಾನೀಗ ದ್ವಂದ್ವ ಸ್ಥಿತಿಯಲ್ಲಿ ಇದ್ದೇನೆ. ಶ್ರುತಿ ನನ್ನನ್ನು ಇಷ್ಟ ಪಡ್ತಾ ಇದ್ದಾಳೆ, ಅಲ್ಲದೇ ಅಪ್ರತಿಮ ಸುಂದರಿ ಬೇರೆ. ಅವಳ ಲವ್ ಲೆಟರ್ ಇದನ್ನ ಸ್ಪಷ್ಟ ಪಡಿಸಿದೆ. ಅದೂ ಅಲ್ಲದೆ ನನ್ನ ವಿದ್ಯಾರ್ಥಿನಿ ಕೂಡ ಅಲ್ಲ. ಶಿಲ್ಪಾಳ ವಿಷ್ಯದಲ್ಲಿ ಹಾಗಾಗೋದಿಲ್ಲ. ಅವ್ಳು ನನ್ನ ಸ್ಟೂಡೆಂಟ್ ಮಾತ್ರ ಅಲ್ಲ, ಅವ್ಳು ಕೇವಲ ನನ್ನ ಹಿಂದೆ ಸುತ್ತುತ್ತಾ ಇರ್ತಾಳೆ ವಿನಹ ನನ್ನ ಬಳಿ ಇದರ ಬಗ್ಗೆ ಮಾತಾಡಿಲ್ಲ. ಇದೆಲ್ಲಾ ಗಣನೆಗೆ ತೆಗೆದುಕೊಂಡ್ರೆ ಮೊದಲ ಆಧ್ಯತೆ ಶ್ರುತಿಗೆ ಕೊಡ್ಬೇಕು. ನಾನು ಮಾಡ್ಬೇಕಾಗಿರೋ ಫರ್ಸ್ಟ್ ಕೆಲ್ಸ ಅಂದ್ರೆ ಶ್ರುತಿ ಲೆಟರ್ ಗೆ ರಿಪ್ಲೇ ಮಾಡಿ ಅವ್ಳನ್ನ ಒಪ್ಕೊಬೇಕು. ಪ್ರತಿಮಾ ಹತ್ರ ಅವ್ಳ ನಂಬರ್ ಕೇಳಿ ಮೆಸೇಜ್ ಮಾಡ್ತೀನಿ.
ಶ್ರುತಿ: ಓ ಮೈ ಗಾಡ್. ಪ್ರಜ್ವಲ್ ನನ್ನ ಪ್ರೀತಿನಾ ಒಪ್ಕೊ ಬಿಟ್ರು. ನಾನು ಅವ್ರ ಬಳಿ ನನ್ನ ಎಲ್ಲಾ ಭಾವನೆಗಳನ್ನ ಹಂಚಿಕೊಳ್ಳೋಕೆ ಶುರು ಮಾಡಿದೀನಿ. ಅವರ ಜೊತೆಗಿನ ಒಂದೊಂದು ಕ್ಷಣವೂ ಮರೆಯಲಾಗದಂತಾದ್ದು. ನನ್ನ ಜೀವನದಲ್ಲಿ ಅವ್ರೆ ನನ್ನ ಮೊದಲ ಹಾಗೂ ಕೊನೆಯ ಪ್ರೀತಿ ಆಗ್ಬೇಕು ಅಂತ ದೇವ್ರಲ್ಲಿ ಪ್ರಾರ್ಥನೆ ಮಾಡ್ತೀನಿ.
ಶಿಲ್ಪಾ: ಓ ಗಾಡ್. ಶ್ರುತಿ ಕಡೆಗೆ ಪ್ರಜ್ವಲ್ ಸೆಳೆಯಲ್ಪಿಟ್ಟಿದ್ದಾರೆ ಅಂತ ಅನಿಸ್ತಿದೆ. ಈ ಶ್ರುತಿಯ ಬಗ್ಗೆ ಇದ್ದ ಭಯ ಈಗೀಗ ನಿಜ ಆಗ್ತಾ ಇದೆ. ಕೇವಲ ಓದಿನಲ್ಲಿ ಮಾತ್ರವಲ್ಲದೇ ನನ್ನ ಪ್ರೈವೇಟ್ ಲೈಫ್ ನಲ್ಲೂ ಎದುರಾಳಿ ಆಗಿ ನಿಂತಿದ್ದಾಳೆ. ನಾನು ಸೋಲ್ತ ಇದಿನಾ? ಹೇಗಾದ್ರೂ ಮಾಡಿ ಅವ್ಳನ್ನ ಅವ್ರಿಂದ ದೂರ ಹೋಗೋ ಹಾಗೆ ಮಾಡ್ಬೇಕು.
ಪ್ರಜ್ವಲ್: ಶ್ರುತಿ... ನನ್ನ ಜೀವ-ಜೀವನ ಎಲ್ಲಾ. ಅವ್ಳಿಂದಾಗಿ ನನ್ನ ಹೃದಯದಲ್ಲಿ ಸಂತೋಷದ ವಾತಾವರಣ. ಶ್ರುತಿ, ನಿನ್ನನ್ನ ಪಡೆಯೋಕೆ ನಾನು ತುಂಬಾ ಅದೃಷ್ಟವಂತ ಅಂತ ಹೇಳೋಕೆ ಇಷ್ಟಪಡ್ತೀನಿ. ಆದಷ್ಟು ಬೇಗ ಅಪ್ಪ-ಅಮ್ಮನ ಬಳಿ ಈ ವಿಷ್ಯ ಹೇಳಿ ನಿನ್ನನ್ನ ನನ್ನ ಬಾಳಸಂಗಾತಿಯಾಗಿ ಮಾಡ್ಕೊಳ್ತೀನಿ.
ಶ್ರುತಿ: ಹಾ.. ಅಂತೂ ನನ್ನ ಅಪ್ಪ-ಅಮ್ಮ ನಮ್ಮಿಬ್ಬರ ಪ್ರೀತಿನ ಒಪ್ಕೊಂಡು ಬಿಟ್ರು. ಉಫ್... ಆದ್ರೂ ಒಂದು ತಿಂಗಳು ನಾನು ಅವ್ರನ್ನ ಒಪ್ಪಿಸೋಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅವ್ರ ಮನೆಲಿ ಯಾವುದೇ ವಿರೋಧ ಇಲ್ಲದೆ ವಿಷ್ಯ ಹೇಳಿದ ಕೂಡ್ಲೆ ಒಪ್ಕೊಂಡ್ರು ಅಂತ ಎರಡು ದಿನ ಮೊದ್ಲೇ ಹೇಳಿದ್ರು. ಈಗ ಯಾವುದೇ ತೊಂದ್ರೆ ಇಲ್ಲ. ಪ್ರಜ್ವಲ್ ನನ್ನ ಲೈಫ್ ಪಾರ್ಟ್ನರ್ ಆಗೋದು ಕನ್ಫರ್ಮ್ ಆಯ್ತು. ನನ್ನ ಓದಿಗಿಂತ ಅವ್ರೆ ನನ್ನ ಮೊದಲ priority. ಅವ್ರ ಹತ್ರ ಹೇಳಿಬಿಡ್ಬೇಕು ಆದಷ್ಟು ಬೇಗ ಮದ್ವೆ ಆಗಿ, ಅವ್ರಲ್ಲಿ ನನ್ನನ್ನು ಒಬ್ಬಳನ್ನಾಗಿ ಮಾಡ್ಕೊಳಿ ಅಂತ. ನನಗೂ ಗೊತ್ತು ಅವ್ರೂ ಕೂಡ ಇದರ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ.
ಶಿಲ್ಪಾ: ಪ್ರಜ್ವಲ್ರನ್ನ ಪಡೆಯೋ ದಾರಿಗಳೆಲ್ಲಾ ಒಂದೊಂದಾಗಿ ಮುಚ್ಚಿ ಹೋಗ್ತಾ ಇವೆ. ನನ್ನ ಎಲ್ಲಾ ಪ್ರಯತ್ನಗಳೂ ವ್ಯರ್ಥವಾಗಿ ಹೋಯ್ತು. ಒಂದು ದಿನ, ಲೈಬ್ರರಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹೋಗಿ ಹಗ್ ಮಾಡ್ಕೊಂಡೆ. ಆಮೇಲೆ ಅವ್ರ ಮನೆಗ್ ಹೋಗಿದ್ದೆ. ಆಗ ಅವ್ರು ಸ್ಟೂಡೆಂಟ್ ಆಗಿ ಈ ರೀತಿ ಬಿಹೇವ್ ಮಾಡೋದು ಸರಿಯಲ್ಲ. ನನಗೆ ನಿನ್ನ ಮೇಲೆ ಪ್ರೀತಿ ಇದೆ.. ನೀನು ಒಂದು ಮುಗ್ದ ಮಗು ತರ ಅಷ್ಟೇ ಅಂದ್ಬಿಟ್ರು. ಶ್ರುತಿ ಕೂಡ ನನ್ ತರನೇ ಸ್ಟೂಡೆಂಟ್. ಅವ್ಳನ್ನ ಮದ್ವೆ ಆಗೋಕೆ ಹೇಗ್ ರೆಡಿ ಆದ್ರಿ ಅಂತ ಕೇಳಿದ್ದಕ್ಕೆ ಕೆಲವೊಂದು ಎಮೋಷನ್ಸ್ ಗಳನ್ನ ಎಕ್ಸ್‌ಪ್ಲೇನ್ ಮಾಡೋಕೆ ಆಗಲ್ಲ ಅಂತ ಅವ್ಳೇ important ಅನ್ನೋ ತರ ಹೇಳಿಬಿಟ್ರು. ಇದು ನನ್ನ ಜೀವನದ ಅತಿ ದೊಡ್ಡ ಸೋಲು, ನನ್ನ ಪ್ರತಿಸ್ಪರ್ಧಿಯ ಗೆಲುವು. ನನ್ನ ಮನಸಿಗೆ ಆದ ಗಾಯವನ್ನು ಬಚ್ಚಿಡಲಾರೆ. ನನ್ನ ಎದೆಯ ಗೂಡಿನಲ್ಲಿ ಬೆಂಕಿ ಇಟ್ಟಿದ್ದಾರೆ. ಅವರಿಬ್ಬರೂ ಮದುವೆ ಆಗೋ ಮೊದಲೇ ಕೊಂಡು ಬಿಡಲೇ? ಆದ್ರೆ ನಾನೇನು ಮಾಡ್ಲಿ? ನಾನು ನನ್ನ ಪ್ರೀತಿಯ ಹುಡುಗನನ್ನು ಕೊಲ್ಲುವಷ್ಟು ಕಟುಕಿಯಲ್ಲ. ನಾನು ಕೊಲೆಗಾರ್ತಿಯಲ್ಲ. ಸಮಾಧಾನ ಮಾಡ್ಕೊಂಡೆ. ಅವಳ ಮೇಲಿನ ದ್ವೇಷಕ್ಕಿಂತ ಇವರ ಮೇಲಿನ ಪ್ರೀತಿಗೆ ಮಹತ್ವ ಕೊಟ್ಟೆ. ನಾನು ದ್ವೇಷವನ್ನು ದೂರತಳ್ಳಲು ಯತ್ನಿಸಿದೆ. ಆದ್ರೆ ಅವರಿಬ್ಬರನ್ನೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಪ್ರಜ್ವಲ್ ಪಕ್ಕದಲ್ಲಿ ಅವಳನ್ನು ಸಹಿಸಲು ಅಸಾದ್ಯ.
ಪ್ರಜ್ವಲ್: ಶ್ರುತಿ.. ನನ್ನ ಪ್ರೀತಿಯ ಹುಡುಗಿ. ಅವ್ಳು ತನ್ನೆಲ್ಲಾ ಎಫರ್ಟ್ ಹಾಕಿ ನನ್ನ ಕೇರ್ ಮಾಡಿದ್ಲು. ನಾನು ಅಷ್ಟೇ.. ಅವ್ಳನ್ನ ಆದಷ್ಟು ಖುಷಿಪಡಿಸಲು ಪ್ರಯತ್ನಿಸಿದೆ. ಯಶಸ್ವಿಯೂ ಆದೆ. ಈಗ ಅವ್ಳು ನನ್ನ ಅರ್ಧಾಂಗಿ. ಲವ್ ಯು ಶ್ರು… love you so much..
ಶ್ರುತಿ: ಪ್ರಜ್ವಲ್.. ನನ್ನ ಪ್ರೀತಿಯ ಹುಡುಗ. ಅವ್ರು ನನ್ನನ್ನ ಯಾವಾಗ್ಲೂ ಸಂತೋಷದಿಂದ ಇಡೋಕೆ ಪ್ರಯತ್ನ ಪಟ್ಟಿದ್ದಾರೆ. ನಾನು ಕೂಡ ಅವ್ರ ತುಂಟ ಲವ್ ಅಲ್ಲಿ ಪಾಲುದಾರಳು. ಅಂತೂ ಇಂತೂ ಅವ್ರನ್ನ ಗೆದ್ದು ಮದ್ವೆ ಆದೆ. ಈಗ ಅವ್ರ ಜೀವನದ ಹಾದಿಯಲ್ಲಿ ದೂರ ದೂರದವರೆಗೂ ಸಾಗೋ ಅದೃಷ್ಟ ಸಿಕ್ಕಿದೆ. ಥ್ಯಾಂಕ್ ಯೂ ಮೈ ಲವ್.... ಮುದ್ದು..
ಪ್ರಜ್ವಲ್: ಶಿಲ್ಪಾ... ಬಡಪಾಯಿ ಹುಡ್ಗಿ. ಅನಾಥೆಯಾಗಿದ್ದ ಆಕೆ ನನ್ನಲ್ಲಿ ಎಲ್ಲವನ್ನೂ ಕಂಡುಕೊಳ್ಳಲು ನೋಡಿದಳು. ನನ್ನ ಪ್ರೀತಿ ಬಯಸಿ ಬಂದಳು. ಆದ್ರೆ ನಾನೇ ಅವ್ಳನ್ನ ದೂರ ತಳ್ಳಿದೆ. ಅವ್ಳನ್ನ ಅರ್ಥ ಮಾಡ್ಕೋಳ್ ಬೇಕಿತ್ತು.
ಶ್ರುತಿ: ನನಗೂ ಗೊತ್ತು, ಅವ್ಳು ತುಂಬಾ ಒಳ್ಳೆ ಹುಡುಗಿ. ಆದ್ರೆ ನನ್ನ ಹಾಗೂ ಪ್ರಜ್ವಲ್ ರ ಪ್ರೀತಿಯನ್ನ ಸಹಿಸಲಿಲ್ಲ. ಅವ್ಳು ಅವ್ರನ್ನ ಲೈಬ್ರರಿಯಲ್ಲಿ ತಬ್ಬಿಕೊಂಡಿದ್ದು, ಅವರ ಮನೆಗೆ ಅವರನ್ನು ಓಲೈಸಲು ಹೋಗಿದ್ದು ಎಲ್ಲವೂ ನನಗೆ ಗೊತ್ತು.
ಪ್ರಜ್ವಲ್: ಅವ್ಳು ನನ್ನ ಹಿಂದೆ ಎಷ್ಟು ಸುತ್ತಿದರೂ ಅವಳ ಪ್ರೀತಿಯನ್ನ ಒಪ್ಪಿಕೊಳ್ಳದೆ ಅವಳ ಮುಗ್ದ ಮನಸ್ಸಿನ ಮೇಲೆ ಗಾಯ ಮಾಡಿದೆ. ಯಾರು ಇಲ್ಲದ ಅವಳ ಒಂಟಿ ಹೃದಯದ ಮೇಲೆ ಬರೆ ಹಾಕಿ ಅವಳ ಪ್ರೀತಿ ಸೋಲುವಲ್ಲಿ ನಾನೇ ಕಾರಣ ಆದೆ. ಅದಕ್ಕಾಗಿಯೇ ಅವಳು ಮರಳಿಬರಲಾಗದ ದಾರಿ ಹಿಡಿದಳು. ನಾನೇ ಅವಳ ಸಾವಿಗೆ ನೇರ ಹೊಣೆ. ನಾನೇ ಅವಳ ಕೊಲೆಗಾರ…! ಶ್ರುತಿ: ನಾನು ಅವಳನ್ನ ಎದುರಾಳಿ ಅಂತ ಪರಿಗಣಿಸಿದೆ. ಅವಳು ಪ್ರಜ್ವಲ್ ರಿಂದ ಆದಷ್ಟು ದೂರ ಇರುವಂತೆ ನೋಡಿಕೊಂಡೆ. ಯಾರು ಇಲ್ಲದ ಆಕೆಗೆ ನಾನು ಗೆಳತಿಯಾಗಿ ಬೆಂಬಲವಾಗಿ ನಿಲ್ಲಬೇಕಿತ್ತು. at least, ಅವಳಿಗೆ ಸಮಾಧಾನವನ್ನಾದರೂ ಮಾಡಿ ಸಹೋದರಿಯಾಗಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ. ಅವಳು ಏಕಾಂಗಿತನವನ್ನು ಸಹಿಸಲಾಗದೆ ಮನೋಸ್ಥೈರ್ಯವನ್ನು ಕಳೆದುಕೊಂಡು ಸಾವಿನ ಹಾದಿಯನ್ನು ಆಯ್ಕೆಮಾಡಿಕೊಳ್ಳಲು ನಾನೇ ಪರೋಕ್ಷ ಕಾರಣ. ಆದ್ದರಿಂದ ನಾನೇ ಅವಳ ಕೊಲೆಗಾರ್ತಿ….!
ಇತರ ಕಥೆಗಳಿಗಾಗಿ ಭೇಟಿ ನೀಡಿ: Stories ಅಥವಾ ಈ-ಬುಕ್ ಡೌನ್ಲೋಡ್ ಮಾಡಿಕೊಳ್ಳಲು Download ಗೆ ಹೋಗಿ.