ರಘು ತನ್ನ ಕಣ್ಣುಗಳನ್ನು ಮುಚ್ಚಿದನು. ದೇಹದ ಮೇಲಿನ ಗಾಯಗಳಿಂದಾಗಿ ತಡೆಯಲಾರದ ನೋವು ಆವರಿಸಿತ್ತು. ತನ್ನ ಜೀವನದಲ್ಲಿ ಹಿಂದೆಂದೂ ಅನುಭವಿಸದ ನಿಶ್ಯಕ್ತಿಯನ್ನು ಅನುಭವಿಸತೊಡಗಿದ್ದನು. ಆತನಲ್ಲಿದ್ದ ಹುಮ್ಮಸ್ಸು, ಹುರುಪು ಸುಟ್ಟುಹೋಗುವ ಹಂತಕ್ಕೆ ಬಂದಿತ್ತು. ಕ್ಷಣಗಳು ಉರುಳಿದಂತೆ ನೋವಿನ ತೀವ್ರತೆ ಹೆಚ್ಚುತ್ತಾ ಹೋಯಿತು. ಆದರೆ ಆತನಿಗೆ ತಿಳಿದಿತ್ತು.. ಈ ನೋವು ಕೇವಲ ತಾತ್ಕಾಲಿಕ ಮಾತ್ರ ಎಂದು. ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸುತ್ತಿರುವಾಗ ಇನ್ನೆಲ್ಲಿಯ ನೋವು. ರಸ್ತೆ ಅಪಘಾತದಲ್ಲಿಯೋ ಅಥವಾ ಅನಾರೋಗ್ಯದಿಂದಲೋ ಸಾಯುವುದಕ್ಕಿಂತ ನಮ್ಮ ರಾಷ್ಟ್ರಕ್ಕಾಗಿ ಶತ್ರುಗಳಿಂದ ಹಾರಿ ಬರುವ ಗುಂಡಿನ ಮಳೆಗೆ ಎದೆಯೊಡ್ಡಿ ನಮ್ಮ ನೆಲವನ್ನು ಹಿಡಿದುಕೊಳ್ಳುತ್ತಾ ಸಾಯಬೇಕು ಎಂಬುದು ನನ್ನ ಆಸೆ ಎಂದು ಯಾವಾಗಲೂ ಆತ ಹೇಳುತ್ತಿದ್ದ ಮಾತು ನಿಜವಾಗುವ ಸಮಯ ಸನ್ನಿಹಿತವಾಗಿತ್ತು. ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು. ಸುಮಾರು ಆರು ವರ್ಷದ ಹುಡುಗ ಮನೆಯ ಹಿಂಭಾಗದಲ್ಲಿದ್ದ ಮರದಿಂದ ಕೆಳಗೆ ಬಿದ್ದನು. ತಲೆಯಿಂದ ರಕ್ತ ಒಸರಹತ್ತಿತು. ಜೋರಾಗಿ ಅಳುತ್ತಾ ತನ್ನ ತಾಯಿಯನ್ನು ಕರೆಯತೊಡಗಿದನು. ಮಗನ ಆಕ್ರಂದನ ಕೇಳಿಸಿ ಅಂಗಳದ ತುದಿಯಲ್ಲಿ ಪಾತ್ರೆ ತೊಳೆಯುತ್ತಿದ್ದ, ಸುಮಾರು ಮೂವತ್ತೈದರ ಆಸುಪಾಸಿನ ಮಹಿಳೆ ಕೈಯಲ್ಲಿದ್ದ ಪಾತ್ರೆಯನ್ನು ಅಲ್ಲಿಯೇ ನೆಲಕ್ಕೆಸೆದು ಮನೆಯ ಹಿಂಭಾಗದತ್ತ ಓಡಿದಳು. ಒಂದೇ ಉಸಿರಿನಲ್ಲಿ ಮಗನಿದ್ದಲ್ಲಿಗೆ ಹೋಗಿ ಬಾಚಿ ತಬ್ಬಿ ಹಿಡಿದು ತನ್ನ ತೊಡೆಯ ಮೇಲೆ ಮಗನನ್ನು ಮಲಗಿಸಿಕೊಂಡು ಮೊದಲು ಬೈದಳು... ನಂತರ ತಾಯಿಯ ಪ್ರೀತಿಯ ಸಾಂತ್ವನದ ಮಾತುಗಳು ತಾನಾಗಿಯೇ ಹೊರಬರತೊಡಗಿತು. ಅಂದು ಅಮ್ಮನ ಬೆಚ್ಚನೆಯ ಅಪ್ಪುಗೆಯಲ್ಲಿ ರಕ್ಷೆ ಪಡೆದ್ದಿದ್ದನು… ಆದರೆ ಇಲ್ಲಿ ಇಂದು ಆತ ಭಾರತವೆಂಬ ಪವಿತ್ರ ನೆಲದ ಮೇಲೆ ಕೊನೆಯುಸಿರಿಗಾಗಿ ಕಾಯುತ್ತಿರುವಾಗ ತನ್ನ ತಾಯಿಯ ತೊಡೆಯ ಮೇಲೆ ಮಲಗಿದ ಅನುಭವ ಪಡೆಯತೊಡಗಿದನು. "ಸ್ಯಾಮ್...", ತನ್ನ ತಣ್ಣಗಿನ ಒಣಗಿದ ತುಟಿಗಳನ್ನು ನಿಧಾನವಾಗಿ ಆಡಿಸಿದನು.. ಸಮರ್ಥ ರಘುವಿನ ತಲೆಯನ್ನು ತನ್ನ ಕೈಗಳಲ್ಲಿ ಹಿಡಿದನು. "ನೀರು... ನೀ...ರು..". ರಘು ಹಾಗೂ ಸಮರ್ಥ ಒಂದೇ ಊರಿನವರು. ಚಿಕ್ಕಂದಿನಿಂದಲೂ ಒಟ್ಟಿಗೇ ಆಡಿ ಬೆಳೆದವರು. ಈ ಗೆಳೆತನ ಸೈನ್ಯ ಸೇರಿದ ಮೇಲೂ ಹಾಗೆಯೇ ಮುಂದುವರೆದಿತ್ತು, ಒಂದೇ ಬೆಟಾಲಿಯನ್. ಸೇನೆಯಲ್ಲಿ ಜೀವನ ಏರು ಪೇರುಗಳನ್ನು ಜೊತೆಯಾಗಿ ಕಳೆದಿದ್ದ ಅವರಿಬ್ಬರು ಅವರ ಬೆಟಾಲಿಯನ್ನಲ್ಲಿ ಲವ-ಕುಶ ಎಂದೇ ಪ್ರಸಿದ್ದರಾಗಿದ್ದರು. ರಘುವಿನ ಬಾಯಿಯ ಬಳಿ ಬಾಟಲಿಯನ್ನು ಹಿಡಿದು ನಿಧಾನವಾಗಿ ನೀರನ್ನು ಕುಡಿಸಿದನು. ಸಮರ್ಥನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಗೆಳೆಯನಿಗೆ ವಿಧಾಯ ಹೇಳುವುದು ಅನಿವಾರ್ಯ ಎಂಬುದು ಆತನಿಗೆ ತಿಳಿದಿತ್ತು. "ಸ್ಯಾಮ್.. ನೀನು ಮನೆಗೆ ಹೋದಾಗ, ಮನೆಯಲ್ಲಿ ಹೇಳು..", ಒಮ್ಮೆ ಧೀರ್ಘವಾಗಿ ಉಸಿರೆಳೆದುಕೊಂಡನು. "ಮನೆಯಲ್ಲಿ ಹೇಳು. ಈ ಫಾಟ್.. ಈ ಫಾಟ್ ಫಾರ್ ದಿ ಲ್ಯಾಂಡ್ ವೇರ್ ಈ ಗ್ರ್ಯೂ, ಪ್ಲೇಯ್ಡ್, ಲರ್‌ನ್ಟ್ , ಕ್ರೈಡ್ ಅಂಡ್ ವೇರ್ ಈ ಲಿವ್ಡ್.. ಶತ್ರುಗಳನ್ನು ಯಮಪುರಿಗಟ್ಟುತ್ತಾ ನೆಲಕ್ಕೆ ಉರುಳಿದನೆಂದು ಹೇಳು.." ಎಂದು ಮಾತು ನಿಲ್ಲಿಸಿದ. ನೋವು ಮುಂದೆ ಮಾತನಾಡಗೊಡಲಿಲ್ಲ. ಸಮರ್ಥನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಕಣ್ಣುಗಳು ತುಂಬಿ ಬಂದಿದ್ದವು. ಸೈನಿಕರಾದವರು ಎಂದಿಗೂ ಅಳಬಾರದು ಎಂದು ಸಾಮಾನ್ಯವಾಗಿ ಜನರು ಹೇಳುವ ಮಾತು. ಆದರೆ ಸೇನಾಮನದಿಂದ ಹೊರಬಂದು ಆಲೋಚಿಸಿದಾಗ ಆತನ ಅಳುವಿಗೆ ಸಾಕಷ್ಟು ಕಾರಣಗಳಿರುವುದು ತಿಳಿಯುತ್ತದೆ. Yes. They cry without letting anyone know they are crying. ಜೀವದ, ಜೀವನದ ಗೆಳೆಯ ತನ್ನ ಕಣ್ಣ ಮುಂದೆಯೇ ಮಡಿಯುತ್ತಿರುವುದನ್ನು ನೋಡಿ ಕಣ್ಣುಗಳಿಂದ ನೀರು ಚಿಮ್ಮಿತು... ಕೆನ್ನೆಯ ಮೇಲೆ ಜಾರಿತು. ಕೈಯಲ್ಲಿದ್ದ ಬಂದೂಕವನ್ನು ನೆಲೆದ ಮೇಲಿಟ್ಟು ಕಣ್ಣನ್ನು ಒರೆಸಿಕೊಂಡನು. ಆತನಿಗೂ ತಿಳಿದಿತ್ತ್ತು - ತಾನು ಈ ಸಮಯದಲ್ಲಿ ಧೃತಿಗೆಡದೆ ಮುಂದುವರೆಯಬೇಕೆಂದು. "ರಘು.. ಸ್ವಲ್ಪ ಹೊತ್ತು.. ಸ್ವಲ್ಪ ಹೊತ್ತು ಅಷ್ಟೇ, ನಮ್ಮ ಮೆಡಿಕಲ್ ಟೀಂ ಬರುತ್ತೆ. You’ve to live.. My friend..”. ಕಣ್ಣಿನಲ್ಲಿ ಹೊಳಪು ಮಾಸುತ್ತಿದ್ದರೂ, ಮುಖದಲ್ಲಿ ನಗುವನ್ನು ತಂದುಕೊಂಡು ರಘು ಅರೆಜೀವವಾಗಿದ್ದ ತುಟಿಗಳನ್ನು ಬಿಡಿಸಿದ. ಆ ನಗುವಿನಿಂದಲೇ ಗೆಳೆಯನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ... ಫಾರ್ ಹಿಸ್ ಓನ್ ಡೆತ್…! ಹುತಾತ್ಮರಾಗುವುದು ಎಂದರೆ ಸೈನಿಕನ ಜೀವನದ ಗೌರವ ಎಂದು ಸೇನೆಯಲ್ಲಿನ ವಾಕ್ಯ. ಒಬ್ಬ ಸೈನಿಕ ಸಾಯಬಹುದು. ಆದರೆ ಆತನ ಆತ್ಮಸ್ಥೈರ್ಯ, ಸೇವೆ ಮತ್ತು ದೇಶಪ್ರೇಮ ಅಮರ ಎಂಬುದು ರಘುವಿಗೆ ತಿಳಿದ ವಿಷಯ. ಮತ್ತೆ ರಘುವಿನ ಮಧುರ ನೆನಪಿನ ಚೌಕಿಯೊಳಗೆ ಹೆಂಡತಿ ಮಗುವನ್ನು ಎತ್ತಿಕೊಂಡಿದ್ದನ್ನು ಕಂಡನು. ಅದೆಷ್ಟು ಸುಂದರ ತನ್ನ ಲೇಡಿ ಲವ್ ಮತ್ತು ನಗುತ್ತಿರುವ ಮಗಳನ್ನು ನೋಡಲು. ಗಡಿರೇಖೆಯ ಬಳಿ ಆತನನ್ನು ರವಾನಿಸಿ ತಿಂಗಳು ಕಳೆದಿತ್ತು. ಆಗ ಮಗಳ ಜನನದ ಖುಷಿಯ ಸುದ್ದಿ ತಲುಪಿತ್ತು. ಇಬ್ಬರನ್ನೂ ನೋಡುವ ತವಕ ಶುರುವಾಗಿತ್ತು. ಆದರೆ ಕೂಡಲೇ ಹೊರಟು ಬರುವ ಹಾಗೆ ಇರಲಿಲ್ಲ. ಗಡಿಯಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿತ್ತು. ಯಾವಾಗ ಬೇಕಾದರೂ ಶತ್ರುಗಳು ಆಕ್ರಮಣ ಮಾಡಬಹುದಾಗಿತ್ತು. ಆದರೆ ಈಗ ಮಗುವನ್ನು ನೋಡುವ ಬಯಕೆ ಕನಸಾಗಿಯೇ ಉಳಿಯುತ್ತದೆಯೆಂಬ ಭಾವನೆ ಬಲವಾಗಿ ಹೃದಯ ಕಿವುಚಿದಂತೆ ಆಗುತ್ತಿದೆ. ನಮಗೂ ಗೊತ್ತು.. ಇನ್ನೆಂದೂ ತನ್ನ ಮಗಳನ್ನು ಆತ ನೋಡಲಾರ. ಮಗಳೂ ಕೂಡ ತನ್ನ ತಂದೆಯೊಡನೆ ಮಾತನಾಡಲಾರಳು, ಅಪ್ಪನ ಮುದ್ದನ್ನು ಅನುಭವಿಸಲಾರಳು. ಆನೆ ಬಂತೊಂದಾನೆ ಆಟ ಇಲ್ಲವಾಯಿತು. ಉಸಿರೆಳೆದುಕೊಳ್ಳಲು ಪ್ರಯತ್ನಿಸಿದ ಆದರೆ ಶ್ವಾಸಕೋಶ ಬೆಂಬೆಲಿಸುತ್ತಿಲ್ಲ. ಸ್ನೇಹಿತನ ತೊಡೆಗಳು ಕಲ್ಲಿನ ಬಂಡೆಯಂತೆ ಒತ್ತತೊಡಗಿ ನೋವಿನಿಂದ ಮುಖ ಕಿವುಚಿದನು. ಸಮರ್ಥ ರಘುವಿನ ಕೈಯ ಮೇಲಿನ ಹಿಡಿತವನ್ನು ಬಿಗಿಗೊಳಿಸಿದನು. ಆಪ್ತ ಗೆಳೆಯನನ್ನು ಕಳೆದುಕೊಳ್ಳಲು ಆತ ಸಿದ್ದನಿರಲಿಲ್ಲ. ಎಲ್ಲವೂ ನೀರಿನಲ್ಲಿ ಮಾಡಿದ ಹೋಮ ಎಂಬುದು ಆತನ ಮನಸ್ಸು ಹೇಳುತ್ತಿತ್ತು. "ರಘು.. ರಘು.." ಮತ್ತೊಮ್ಮೆ ಕೂಗಿದ. ಆದರೆ ಸ್ನೇಹಿತನ ದ್ವನಿ ರಘುವಿಗೆ ಕಿಂಚಿತ್ತೂ ಸಮಾಧಾನ ನೀಡಲಿಲ್ಲ. ತನ್ನನ್ನೇ ಹಿಂಬಾಲಿಸಿಕೊಂಡು ಬರುತ್ತಿದ್ದ ಮೃತ್ಯುವನ್ನು ಧಿಟ್ಟಿಸುತ್ತಾ ತಾಯಿಯ ನೆನಪಿನ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಮೊದಲು ಮಾಡಿದ. ಓಹ್.. ಈಗಲೂ ಅಲ್ಲೇ ಇದ್ದಾಳೆ. ಅದೇ ಅಂಗಳದಲ್ಲಿ ನಿಂತಿದ್ದಾಳೆ. ಅದೇ ಬಣ್ಣ ಮಾಸಿದ ಸೀರೆ. ವಯಸ್ಸು ಹೆಚ್ಚಾಗಿದೆ. ಮುಪ್ಪು ಆವರಿಸಿದೆ. ಮುಖದಲ್ಲಿ ನೆರಿಗೆ ಕಾಣಿಸಿಕೊಂಡಿದೆ. ಆದರೆ ಅದೇ ಪ್ರೀತಿ, ಅಕ್ಕರೆ.. ಈಗಲೂ ಆತನನ್ನು ಸಂತೈಸಲು ನಿಂತಿದ್ದಾಳೆ. "ಅಮ್ಮಾ...", ಕೊನೆಯ ಬಾರಿಗೆಂಬಂತೆ ತಾಯಿಯನ್ನು ಕರೆದು ತಲೆಯನ್ನು ವಾಲಿಸಿದನು. ಬಂಕರ್ ನಲ್ಲಿದ್ದ ಎಲ್ಲಾ ಸೈನಿಕರ ಕಣ್ಣುಗಳಲ್ಲಿ ಭಾವುಕತೆಯು ಎದ್ದು ಕಾಣುತ್ತಿತ್ತು. ಯಾರೊಬ್ಬರೂ ಕೂಡ ಮಾತನಾಡುತ್ತಿಲ್ಲ. ನೀರವ ಮೌನ ತುಂಬಿದೆ. ಅಲ್ಲಿ ಬದುಕುವುದು ಕಷ್ಟ. ಆದರೆ ಸ್ವಲ್ಪ ಪ್ರೀತಿ ಮತ್ತು ವಿಶ್ವಾಸ ಎಲ್ಲವನ್ನೂ ಬದಲಿಸುತ್ತದೆ. ಇಲ್ಲಿ ಜೀವನ ಮತ್ತು ಮರಣವು ಮೃದುವಾದ, ತೆಳ್ಳಗಿನ ಹಗ್ಗದಿಂದ ಬಂಧಿಸಲ್ಪಟ್ಟಿರುತ್ತದೆ. ಸಣ್ಣ ಗಾಳಿ ಬೀಸಿದರೂ ಸಾಕು.. ಎಲ್ಲವೂ ತರಗೆಲೆಗಳಂತೆ ಹಾರಿಹೋಗುತ್ತವೆ. ಆದರೆ ಒಬ್ಬ ಸೈನಿಕನ ದೇಶಸೇವೆಯ ಹೆಮ್ಮೆಯನ್ನು ಏನೂ ಮಾಡಲಾಗದು. ದೇಶಕ್ಕಾಗಿ ವಾಸಿಸುವ ಹೆಮ್ಮೆ, ರಾಷ್ಟ್ರಕ್ಕಾಗಿ ಸಾಯುವ ಹೆಮ್ಮೆ. ಬಂಕರ್ ಬಳಿಯ ಕಿವಿಗಡಚಿಕ್ಕುವ ಗ್ರೆನೇಡ್ ಸ್ಫೋಟದಿಂದ ಮಡುಗಟ್ಟಿದ್ದ ಮೌನ ಕರಗಿಹೋಯಿತು. ಅರೆಕ್ಷಣದಲ್ಲಿ ಅಲ್ಲಿದ್ದ ಎಲ್ಲಾ ಸೈನಿಕರು ಕೈಗಳಲ್ಲಿ ರೈಫಲ್ ಗಳನ್ನು ಹಿಡಿದು, ಶತ್ರುಗಳನ್ನು ಮೆಟ್ಟಿ ತರಿದುಹಾಕುವ ಉತ್ಸಾಹದಿಂದ ಓಡಿದರು. ಅವರಿಗೆ ಅಲ್ಲಿಯೇ ಅಳುತ್ತಾ ಕೂರಲು ಸಮಯವಿಲ್ಲ. A soldier never cries...
ಇತರ ಕಥೆಗಳಿಗಾಗಿ ಭೇಟಿ ನೀಡಿ: Stories ಅಥವಾ ಈ-ಬುಕ್ ಡೌನ್ಲೋಡ್ ಮಾಡಿಕೊಳ್ಳಲು Download ಗೆ ಹೋಗಿ.