ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್ಮೆಂಟ್ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. "u r a cheater. esht life na haal madiddiya? its enough. get outta my lyf" - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಸಮಯವು ಮಾತ್ರ ವಿರಮಿಸದೆ ಮುಂದಕ್ಕೆ ಸರಿಯುತ್ತಿತ್ತು. ಒಮ್ಮೆ ಆಕಾಶದತ್ತ ಧಿಟ್ಟಿಸಿನೋಡಿದಳು. ಮೋಡವಿಲ್ಲದ ಶುಭ್ರಾಗಸದಲ್ಲಿ ಮಿಂಚುತ್ತಿರುವ ತಾರೆಗಳು ಇವಳ ಕಂಗಳಲ್ಲಿ ಪ್ರತಿಬಿಂಬಿಸಿದವು. ಕೆಳಗೆ ನೋಡಿದಾಗ ಕಂಡದ್ದು ನಿರ್ಜನವಾದ ರಸ್ತೆ. ತನ್ನ ಪರಿಸ್ಥಿತಿಯನ್ನು ತಾನೇ ಹಳಿದುಕೊಳ್ಳುತ್ತಾ ಒಮ್ಮೆ ಧೀರ್ಘವಾಗಿ ಉಸಿರನ್ನೆಳೆದುಕೊಂಡು ಮತ್ತೊಂದು ಹೆಜ್ಜೆ ಎತ್ತಿಟ್ಟಳು. ಅದು ಅವಳ ಕೊನೆಯ ಹೆಜ್ಜೆ. ಗಾಳಿಯಲ್ಲಿತ್ತು ಕಾಲು. ಕೆಲವೇ ಸೆಕೆಂಡುಗಳಲ್ಲಿ ಅವಳ ದೇಹ ರಸ್ತೆಯ ನಡುವಲ್ಲಿ, ರಕ್ತದ ಮಡುವಲ್ಲಿತ್ತು. ----------------- ಬೀಪ್ ಬೀಪ್ ಸದ್ದುಗಳು ಲಯಬದ್ದವಾಗಿ ಕಿವಿಗೆ ಬಡಿದಾಗ ಭಾರ್ಗವ ನಿಧಾನವಾಗಿ ಕಣ್ಣುಗಳನ್ನು ತೆರೆದ. ಶಭ್ಧ ಬಂದತ್ತ ತಿರುಗಿ ನೋಡಲು ಯತ್ನಿಸಿದ. ಉಹೂ. ಅವನಿಂದ ಸಾಧ್ಯವಾಗುತ್ತಿಲ್ಲ. ದೇಹದ ಯಾವ ಭಾಗಗಳೂ ಅವನ ಪ್ರಯತ್ನಕ್ಕೆ ಸ್ಪಂಧಿಸುತ್ತಿಲ್ಲ. ನರಕಯಾತನೆ ಆಗುತ್ತಿದ್ದರೂ ತನ್ನೆಲ್ಲಾ ಶಕ್ತಿ ಬಳಸಿ ಎದ್ದು ಕುಳಿತಾಗ ಕಂಡದ್ದು ದೇಹಕ್ಕೆ ಅಂಟಿಕೊಂಡಿದ್ದ ವಿವಿಧ ಯಂತ್ರಗಳಿಂದ ಹೊರಬಂದಂತಹ ಬೇರೆಬೇರೆ ಬಣ್ಣದ ವೈರುಗಳು. ಹಿಂದಿನ ದಿನ ಏನಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಲು ಹರಸಾಹಸ ಪಡತೊಡಗಿದ. ಯಾವುದೋ ಕಟ್ಟಡವೊಂದರ ಮೇಲೆ ನಿಂತಿರುವ ಅಸ್ಪಷ್ಟ ಚಿತ್ರಣ ಮೂಡೀತೆ ವಿನಹ ಉಳಿದಿದ್ದೆಲ್ಲವೂ ಕಿವಿಗಳ ತಮಟೆ ಸೀಳುವಂತಿರುವ ಅವರಿವರ ಅರಚಾಟಗಳು ಮಾತ್ರ. ಕಿರಿಚಾಟದ ಪ್ರತಿಧ್ವನಿಗಳನ್ನು ಸಹಿಸಲಾರಾದವನಾಗಿ 'ಸ್ಟಾಪ್ ಇಟ್, ಸ್ಟಾಪ್ ಇಟ್' ಎಂದು ಹುಯಿಲಿಡತೊಡಗಿದ. ಹೆಚ್ಚಿದ ಒತ್ತಡದಿಂದಾಗಿ ತಲೆಯಲ್ಲಾಗಿದ್ದ ಗಾಯದಿಂದ ರಕ್ತ ಚಿಮ್ಮಿಬಂದು ಶ್ವೇತವರ್ಣದ ಬ್ಯಾಂಡೇಜನ್ನು ಕೆಂಪಾಗಿಸಿತು. ಭಾರ್ಗವನ ಅರಚಾಟವನ್ನು ಕೇಳಿ ಗಾಬರಿಯಿಂದ ಬಾಗಿಲು ತೆರೆದು ಒಳಗೆ ಓಡಿಬಂದಳೊಬ್ಬಳು ನರ್ಸ್. ಅವಳ ಹಿಂದೆಯೇ ಧಾವಿಸಿಬಂದಳೊಬ್ಬಳು ಇಪ್ಪತ್ತರ ಆಸುಪಾಸಿನ ಸುಂದರ ಯುವತಿ. ಅವಳು ಶ್ವೇತಾ. ----------------- ಆಗ ತಾನೇ ಆಫೀಸಿನಿಂದ ಹಿಂತಿರುಗಿದ್ದ ಭಾರ್ಗವ, ಮಂಚದ ಮೇಲೆ ಕುಳಿತು ವ್ಹಾಟ್ಸಪ್ಪ್ನಲ್ಲಿ ಬಂದಿದ್ದ ಸಂದೇಶಗಳನ್ನು ಓದುತ್ತಿದ್ದನು. ಇದ್ದಕ್ಕಿದ್ದಂತೆಯೇ ಅಡುಗೆ ಕೋಣೆಯಿಂದ ಶ್ರುತಿಯು ಚೀರುತ್ತಿರುವುದನ್ನು ಕೇಳಿ ಮಾಬೈಲನ್ನು ಅಲ್ಲೇ ಎಸೆದು ಅವಳಿದ್ದ ಕಡೆಗೆ ಓಡಿದ. ಕೆಲವೇ ಕ್ಷಣಗಳಲ್ಲಿ ಹೊಸ ಸಂದೇಶ ಬಂದಿದ್ದರ ಸೂಚಕವಾಗಿ ಬೀಪ್ ಬೀಪ್ ಸದ್ದು ಬರತೊಡಗಿತ್ತು. ಅವನಾಗಲೇ ಅದನ್ನು ಓದಿ ಅಳಿಸಿದ್ದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿತ್ತೇನೋ... ಅವಳತ್ತ ಬಂದವನೇ ತನ್ನ ತುಟಿಗಳನ್ನು ಅವಳ ತುಟಿಗಳಿಗೆ ಒತ್ತಿ ಹಿಡಿದನು. ಒಮ್ಮೆಲೆ ಅವಳ ಚೀರಾಟ ನಿಂತಿತಲ್ಲದೇ, ಆತನ ಈ ಅನಿರೀಕ್ಷಿತ ನಡೆಗೆ ಅಚ್ಚರಿಯಿಂದ ಕಣ್ಣುಗಳನ್ನು ಹಿಗ್ಗಲಿಸಿದಳು. ಕೆಲವು ಕ್ಷಣಗಳಲ್ಲಿ ಅವಳಿಗರಿವಿಲ್ಲದಂತೆಯೇ ಮುಚ್ಚಿಕೊಂಡವು. ತುಟಿಗಳು ಅವನ ಕಾರ್ಯಕ್ಕೆ ಲಯಬದ್ದವಾಗಿ ಸ್ಪಂದಿಸತೊಡಗಿದವು. ಕೈ ಬೆರಳಿಗಾಗಿದ್ದ ಗಾಯದ ನೋವು ಅದಾಗಲೇ ಮರೆತು ಹೋದಂತಿತ್ತು. ------------------- ಒಳಬಂದ ನರ್ಸ್ ಭಾರ್ಗವನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದಳಾದರೂ, ತನ್ನ ದೇಹಕ್ಕೆ ಅಳವಡಿಸಲಾಗಿದ್ದ ವೈರುಗಳನ್ನು ಕಿತ್ತೆಸೆಯುವುದರಲ್ಲೇ ಬ್ಯುಸಿಯಾಗಿದ್ದ. ಮುಂದೆ ಬಂದ ಶ್ವೇತಾ ಈತನ ಎಡಬುಜದ ಮೇಲೆ ಮೆಲ್ಲಗೆ ಕೈಯಿರಿಸಿ ಸಮಾಧಾನಗೊಳ್ಳುವಂತೆ ತಲೆಯಾಡಿಸಿದಳು. ಆಯಸ್ಕಾಂತದಂತೆ ಸೆಳೆಯುವ ಕಣ್ಣುಗಳನ್ನು ಹೊಂದಿರುವ ಅಪರಿಚಿತ ಸುಂದರಿಯನ್ನು ನೋಡಿ ಆವಕ್ಕಾಗಿ ಎವೆಯಿಕ್ಕದೆ ಅವಳ ಮುಖವನ್ನೇ ಧಿಟ್ಟಿಸಿ ನೋಡುತ್ತಿದ್ದು ಬಿಟ್ಟ. "ನಿಮಗೇನೂ ಆಗಿಲ್ಲ. ಕೆಲವೇ ದಿನಗಳಲ್ಲಿ ಮೊದಲಿನಂತಾಗುವಿರಿ. ರಿಲ್ಯಾಕ್ಸ್"- ಆ ಮೃಧುವಾದ ಮಾತುಗಳು ಅವಳು ಆಸ್ಪತ್ರೆಯಿಂದ ತೆರಳಿ ಗಂಟೆಗಳು ಉರುಳಿದ ಮೇಲೂ ಈತನ ಕಿವಿಗಳಲ್ಲಿ ಹಾಡಿನಂತೆ ಗುನುಗುಡುತ್ತಿತ್ತು. ----------------- ಆಸ್ಪತ್ರೆಯಿಂದ ನೇರವಾಗಿ ತನ್ನ ಆಫೀಸಿನ ಕಡೆಗೆ ಸಾಗಿದ್ದ ಶ್ರುತಿಗೆ ಗೇಟಿನ ಬಳಿಯಲ್ಲೇ ಭಾರ್ಗವನ ಬೈಕಿನ ದರ್ಶನವಾಯಿತು. ಪ್ರತಿನಿತ್ಯವೂ ಒಂದಿಲ್ಲೊಂದು ನೆಪದಲ್ಲಿ ತನ್ನನ್ನು ಮಾತಿಗೆಳೆಯುತ್ತಿದ್ದ ಅವನನ್ನು ಕಂಡರೆ ಒಂದು ರೀತಿಯ ಭಯವಿದ್ದರೂ ಮನಸ್ಸಿನ ಮೂಲೆಯಲ್ಲೊಂದು ಸೆಳೆತ. ನೋಡಲು ಸ್ಫುರದ್ರೂಪಿಯಾಗಿದ್ದ ಆತ ಎಂತಹ ಸಮಯದಲ್ಲೂ ಧೃತಿಗೆಡದೇ ನಗುನಗುತ್ತಾ ಧೈರ್ಯವಾಗಿ ಎದುರಿಸುವ ಅವನ ಪರಿಯೂ ಕೂಡ ಕಾರಣವಾಗಿರಬಹುದು. ಎರಡು ತಿಂಗಳ ಹಿಂದಷ್ಟೇ ಇಂಟರ್ನ್ ಆಗಿ ಆ ಕಂಪನಿಗೆ ಸೇರಿಕೊಂಡಿದ್ದಳು ಶ್ರುತಿ. ಅವಳಲ್ಲಿ ಕೆಲಸವಾರಂಭಿಸಿ ವಾರ ಕಳೆಯುವಷ್ಟರಲ್ಲಿ ಅಲ್ಲಿಯ ಎಲ್ಲ ಗಂಡು ಹೈಕಳ, I mean, ಮೇಲ್ ಎಂಪ್ಲಾಯೀಸ್ಗಳ ಗಮನವನ್ನು ತನ್ನ ಸೈಲೆನ್ಸ್ ಮತ್ತು ಇನೋಸೆನ್ಸ್ ಮೂಲಕ ಆಕರ್ಷಿಸಿದ್ದಳು. ತನ್ನ ಕ್ಯಾಬಿನ್ನಿನ ಬಾಗಿಲು ತೆರೆದು ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ ಭಾರ್ಗವನ ಧ್ವನಿ ಕೇಳಿ ಬೆಚ್ಚಿ ಬಿದ್ದು ಹಿಂದೆ ತಿರುಗಿದಳು. "Excuse me, may I come in....madam?" ಎಂದು ಕಣ್ಣು ಮಿಟುಕಿಸದೆ ತನ್ನನ್ನೇ ನೋಡುತ್ತಿದ್ದವಳನ್ನು ಮತ್ತೊಮ್ಮೆ ಕೇಳಿದ. "Oh.. Oh sure, Come in..." ಸಂಭಾಳಿಸಿಕೊಂಡು ಆತನನ್ನು ಎದ್ದು ನಿಂತು ಆಹ್ವಾನಿಸಿದಳು. ಇವತ್ತು ನನ್ನ ಬರ್ತ್ಡೇ. ಸೊ ಅಫ್ತೆರ್ನ್ನೊನ್ ಲಂಚ್-ಗೆ ಎಲ್ಲರನ್ನೂ ಕರೆದುಕೊಂಡ್ ಹೋಗ್ತಾ ಇದೀನಿ. ರೆಡೀ ಆಗಿರಿ. ನಾನು ಬಂದು ಕರೀತೀನಿ" ಎಂದ. "ಸಾರೀ. ಹ್ಯಾಪೀ ಬರ್ತ್ಡೇ. ಈ ಡಿಂಟ್ ನೋ ದಟ್ ಟುಡೇ ಈಸ್ ಯುವರ್...", ಎನ್ನುವಷ್ಟರಲ್ಲಿ "ಇಟ್'ಸ್ ಓಕೇ." ಎಂದು ಕೈಕುಲುಕಿದ. ಆ ಕಡೆಗೊಮ್ಮೆ ಈ ಕಡೆಗೊಮ್ಮೆ ತಿರುಗಿ ತನ್ನ ಇಕ್ಕೆಲಗಳಲ್ಲಿ ಕುಳಿತವರತ್ತ ನೋಡಿ ಅಂಗೈಯಲ್ಲಿ ಗಲ್ಲವಿರಿಸಿ ಕುಳಿತಿದ್ದಳು. ಭಾರ್ಗವ ಹಾಗೂ ಲತಾ; ಇವರಿಬ್ಬರ ನಡುವೆ ಕುಳಿತಿದ್ದಳು ಶ್ರುತಿ. ಕಾರು ವೇಗವಾಗಿ ಯಲಹಂಕದ ಕಡೆಗೆ ಸಾಗುತ್ತಿತ್ತು. ಹುಟ್ಟುಹಬ್ಬದ ಪ್ರಯುಕ್ತ ಊಟಕ್ಕೆ ಕರೆದುಕೊಂಡು ಹೊರಟಿದ್ದ ಭಾರ್ಗವ ಕಾರಿನ ಕೀಯನ್ನು ಹರೀಶನಿಗೆ ರವಾನಿಸಿದ್ದ. ಶ್ರುತಿ ಬರುವುದರೊಳಗಾಗಿ ಲತಾ ಕಿಟಕಿ ಬಳಿಯ ಸೀಟನ್ನು ತನ್ನದಾಗಿಸಿಕೊಂಡಿದ್ದಳು. ಸಣ್ಣಕಿರುವುದರಿಂದ ನೀನು ಮಧ್ಯೆ ಕೂರು ಎಂದು ಇವಳನ್ನು ಕೂರಿಸಿದ್ದರು. ಅವಳ ಎಡಬದಿಯಲ್ಲಿ ಭಾರ್ಗವ ಪವಡಿಸಿದ್ದ. ಮಧ್ಯೆ ಕುಳಿತಿದ್ದ ಶ್ರುತಿ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ತಿರುಗಿ ಅವರಿಬ್ಬರ ಮುಖವನ್ನೊಮ್ಮೆ ನೋಡಿ ಕೈಗೆ ಗಲ್ಲವನ್ನಾನಿಸಿ ಕುಳಿತಿದ್ದಳು. ಎರಡೂವರೆ ಗಂಟೆಗಳ ಪ್ರಯಾಣದ ನಂತರ ಹೋಟೆಲೊಂದರ ಎದುರು ನಿಂತಾಗಲೇ ಈಕೆಗೆ ಸಮಾಧಾನವಾದದ್ದು. ಊಟ ನಿಧಾನವಾಗಿ ಸಾಗುತ್ತಿತ್ತು. ಎಲ್ಲರೂ ಹಾಸ್ಯಾತ್ಮಕವಾಗಿ ಮಾತನಾಡುತ್ತಾ ಊಟವನ್ನು ಅಸ್ವಾಧಿಸುತ್ತಿದ್ದರೆ ಇವಳು ತನ್ನದೇ ಲೋಕದಲ್ಲಿ ವಿಹರಿಸುತ್ತಾ ಏನೊಂದೂ ಮಾತನಾಡದೆ ಕುಳಿತಿದ್ದಳು. ಭಾರ್ಗವ ಇವಳನ್ನು ಮಾತನಾಡಿಸಲೋಸುಗ "ಊಟ ಹೇಗಿದೆ? ಈಗ ರಿಟರ್ನ್ ಯಾವ ರೂಟಲ್ಲಿ ಹೋಗ್ತೀರಿ?" ಎಂದು ಕೇಳಿದ. "ನೀವು ಹೇಗೂ ಹೆಬ್ಬಾಳದ ಆಫೀಸಿನವರೆಗೂ ನೀವು ಹೊಗ್ತೀರಲ್ವ, ಅಲ್ಲಿವರೆಗೂ ನಿಮ್ಜೋತೇನೇ ಬರ್ತೀನಿ. ಅಲ್ಲಿಂದ ದಿನಾಲೂ ಹೋಗೋ ಬಸ್ಸಿಗೆ ಹೋಗ್ತೀನಿ" ಎಂದಳು. "ಊಟ ಹೇಗಿದೆ?" ಎನ್ನುವ ಪ್ರಶ್ನೆಗಿಂತ "ಈಗ ರಿಟರ್ನ್ ಯಾವ ರೂಟಲ್ಲಿ ಹೋಗ್ತೀರಿ?" ಎಂಬುದೇ ಈಕೆಗೆ ಪ್ರಮುಖವಾಗಿ ಕಾಡಿತ್ತು. ಇವಳ ಮಾತನ್ನು ಕೇಳಿ ಎಲ್ಲರೂ ಗೊಳ್ಳೆಂದು ನಕ್ಕರು. "ಅಲ್ಲಾ ರೀ, ಇಲ್ಲಿಂದ ಡೈರೆಕ್ಟ್ ಆಗಿ ಮೆಜ಼ೆಸ್ಟಿಕ್-ವರೆಗೂ ಮೆಟ್ರೋದಲ್ಲಿ ಹೋಗಿ. ಅಲ್ಲಿಂದ ನಿಮ್ಮ ಮನೆ ಕಡೆಗೆ ಬಸ್ ಸಿಗುತ್ತೆ. ಬೇಗ ಮನೆ ಸೇರ್ಕೊಳ್ಬಹುದು", ಎಂದು ನಗುವನ್ನು ಹತ್ತಿಕ್ಕಿಕೊಳ್ಳುತ್ತಾ ಹೇಳಿದಾಗ ಇವಳಿಗೆ ಇರುಸು-ಮುರಿಸಾಯಿತು. ಹರೀಶ ಕೂಡ ಭಾರ್ಗವನ ಮಾತುಗಳನ್ನೇ ಪುನರುಚ್ಚರಿಸಿದಾಗ, ಇದ್ದಕ್ಕಿದ್ದಂತೆ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಹೊರಟುನಿಂತೆ ಬಿಟ್ಟಳು. ಆಗ ಭಾರ್ಗವ ಗಕ್ಕನೆದ್ದು ಅವಳೆಡ ಮುಂಗೈಯನ್ನಿಡಿದು "ಏನ್ರೀ.. ಇಷ್ಟಕ್ಕೆ ಕೋಪ ಮಾಡ್ಕೊಂಡು ಹೊರಟು ಬಿಡೋದಾ? ಬನ್ನಿ ಊಟ ಮಾಡಿ. ನಿಮಗೆ ಹೇಗ್ ಅನ್ಸುತ್ತೋ ಹಾಗೆ ಮಾಡಿ" ಎಂದಾಗ ಸಮಾಧಾನಗೊಂಡವಳಂತೆ ತಿರುಗಿ ಬಂದು ಕುಳಿತು "ಸಾರೀ" ಅಂದು ಎಲ್ಲರ ಮುಖವನ್ನೊಮ್ಮೆ ನೋಡಿದಳು. ಊಟದ ಕಾರ್ಯಕ್ರಮ ಈ ರೀತಿಯ ಡ್ರಾಮದಲ್ಲಿ ಕೊನೆಗೊಂಡಿತು. ಆದಷ್ಟು ಬೇಗ ಹೆಬ್ಬಾಳದ ಆಫೀಸಿಗೆ ಸೇರಿಕೊಂಡರೆ ಸಾಕು ಎಂದು ಮನದಲ್ಲೇ ಶ್ರುತಿ ಪ್ರಾರ್ಥಿಸುತ್ತಿದ್ದ ಶ್ರುತಿಗೆ, ಲತಾ ಐಸ್-ಕ್ರೀಮ್ ತಿಂದು ಹೋಗೋಣವೆಂದಾಗ ಅವಳನ್ನು ಸಾಯಿಸಬೇಕೆನ್ನುವಷ್ಟು ಕೋಪ ಬಂದಿತ್ತು. ಎಲ್ಲರೂ ತಮಗೆ ಬೇಕಾದ ಫ್ಲೇವರ್ ಐಸ್ಕ್ರೀಮ್ಗಳನ್ನು ಕೊಂಡುಕೊಂಡರು. ಸ್ಟ್ರಾಬೆರೀ ಫ್ಲೇವರ್ ಹಿಡಿದಿದ್ದ ಶ್ರುತಿಯ ಬಳಿ, "ನಿಮ್ಮ ಐಸ್-ಕ್ರೀಮಿನಿಂದ ಒಂದು ಸ್ಪೂನ್ ತೆಗೆದುಕೊಳ್ಳಬಹುದೇ, ಮೇಡಮ್? " ಎಂದು ಭಾರ್ಗವನೆಂದಾಗ ಮೌನವಾಗಿ ಆತನ ಕೈಗೆ ನೀಡಿದಳು. " ನಿಮ್ಮ್ ಸೆಲೆಕ್ಶನ್ ಸೂಪರ್ ಕಣ್ರೀ. ಐಸ್ ಕ್ರೀಮನ್ನು ಕೂಡ ಯೋಚಿಸಿ ಮಾಡ್ತೀರಿ." ಹೊಗಳಿದಾಗ ಐಸ್-ಕ್ರೀಮ್ ತಿನ್ನೋಣವೆಂದು ಕರೆದಿದ್ದು ತಾನು, ಹೊಗಳಿಕೆ ಇವಳಿಗೆ ಎಂದು ಮನಸ್ಸಿನಲ್ಲಿಯೇ ಉರಿದುಕೊಂಡಳು. ಈ ರೀತಿಯ ಸಣ್ಣಪುಟ್ಟ ಚೇಷ್ಟೆಗಳ ನಡುವೆ ನಾಲ್ಕು ತಿಂಗಳುಗಳು ಕಳೆಯುವಷ್ಟರಲ್ಲಿ ಶ್ರುತಿ-ಭಾರ್ಗವರ ಸ್ನೇಹ ಗಾಢವಾಗಿತ್ತು. ಇಬ್ಬರೂ ಅಪಾರ್ಟಮೆಂಟ್ವೊಂದರಲ್ಲಿ ಜೊತೆಯಾಗಿ ವಾಸಿಸತೊಡಗಿದರು. ಹೀಗೆ ಅನ್ಯೋನ್ಯವಾಗಿ ಸಹಜೀವನ ನಡೆಸುತ್ತಿದ್ದ ಇವರ ಬಾಳು ಬಿರುಗಾಳಿಯಲ್ಲಿ ಸಿಕ್ಕ ಹಕ್ಕಿಯಂತಾಗಿದ್ದು ಕೇವಲ ಆ ಒಂದು ಸಂದೇಶದಿಂದ. ಶ್ರುತಿ ತರಕಾರಿಯನ್ನು ಕತ್ತರಿಸುವಾಗ ಕೈಗೆ ಚಾಕುವಿನಿಂದ ಗಾಯ ಮಾಡಿಕೊಂಡಿದ್ದಳು.