ನಾನು ಯಾರು? ನನ್ನ ಹೆಸರೇನು? ಅಂತ ಹೇಳುವ ಅವಶ್ಯಕತೆ ಇಲ್ಲವೆಂದುಕೊಳ್ಳುತ್ತೇನೆ. ಏಕೆಂದರೆ ಮುಂದೆ ಕತೆಯಲ್ಲಿ ಬರುವ ವ್ಯಕ್ತಿಯಿಂದ ನನ್ನ ಪರಿಚಯವನ್ನೇ ಮರೆಯುತ್ತೀರಿ ಎಂಬುದು ಸತ್ಯ. ನಾನೊಬ್ಬ ಬರಹಗಾರ. ಆಗಾಗ ಹವ್ಯಾಸಕ್ಕಾಗಿ ಕತೆ-ಕವಿತೆಗಳನ್ನು ಬರೆಯುವವ. ಸಾಮಾನ್ಯ ಬರಹಗಾರ. THE GENTLEMAN, ಈ ಪದ ಸರಿಯಾದ ಸಮಯದಲ್ಲಿ, ಸರಿಯಾಗಿ ಉಪಯೋಗಿಸದೆ, ತನ್ನ ಮೌಲ್ಯವನ್ನು ಕಳೆದುಕೊಂಡಂತಹ ಒಂದು ನತದೃಷ್ಟ ಪದ. ಆದರೆ ಈಗ ಈ ಶಬ್ದಕ್ಕೆ ನ್ಯಾಯವಾಗಿ ಸರಿಹೊಂದುವ, ನೈಜಾರ್ಥಕ್ಕೆ ಬೆಲೆ ಬರುವ ವ್ಯಕ್ತಿಯ ಜೀವನವನ್ನು ನಾನು ಹೇಳ ಹೊರಟಿದ್ದೇನೆ. ಈತ ನಡೆಸಿದ್ದು ಹಣತೆಯ ಜೀವನ. ಅನ್ಯರಿಗೆ ಬೆಳಕನ್ನು ನೀಡಿ ತಾನು ಕತ್ತಲೆಯಲ್ಲಿ ಜೀವ ಸವೆಸಿದವ. ಎಲ್ಲರೂ ನೋಡಿದ್ದು ಇವನ ಕಣ್ಣು ಕುಕ್ಕುವಂತಹ ತೇಜಸ್ಸನ್ನು ಮಾತ್ರ. ಬಿರುದು ನೀಡಿದರು; THE GENTLEMAN. ಯಾರು ಅವನ ಬದುಕಿನ ಹಾದಿಯನ್ನು ನೋಡಲೇ ಇಲ್ಲ. ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.