ಇದರಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಯಾವುದೇ ವ್ಯಕ್ತಿಯ ವೈಯಕ್ತಿಕ ಜೀವನಕ್ಕೆ ಸಂಬಂಧ ಪಟ್ಟಿರುವುದಿಲ್ಲ. ಎಲ್ಲಿಯಾದರೂ ಸಾಮ್ಯತೆ ಕಂಡು ಬಂದಲ್ಲಿ ಅದು ಕೇವಲ ಕಾಕತಾಳೀಯವಷ್ಟೇ. ಎಲ್ಲವೂ ಭವಿಷ್ಯತ್ ಕಾಲದ ಒಂದು ಕಾಲ್ಪನಿಕ ಚಿತ್ರಣ.
ಜೀವನದಲ್ಲಿ ಘಟಿಸುವ ಪ್ರತಿಯೊಂದು ಕ್ಷಣಗಳೂ ಅನಿರೀಕ್ಷಿತ. ಪ್ರೀತಿಯೂ ಇದಕ್ಕೆ ಹೊರತಲ್ಲ. ಪ್ರೀತಿಯೆಂಬುದೇ ಒಂದು ವಿಚಿತ್ರವಾದ ಅನುಭವ. ಬರೆಯ ಹೊರಟರೆ ಮಹಾಕಾವ್ಯವನ್ನೇ ಸೃಷ್ಟಿಸಬಹುದಾದಂತಹ ಬಹುಮುಖದ ವಸ್ತು. ಭಾವನೆಗಳ ಮಹಾ ಪ್ರವಾಹ. ಹಲವಾರು ವಿರುದ್ಧ ಭಾವನೆಗಳನ್ನು ಏಕಕಾಲದಲ್ಲಿ ಹುಟ್ಟುಹಾಕುತ್ತದೆ; ನೋವು, ಸಂತೋಷ, ಅಭದ್ರತೆ ಹಾಗೂ.....
ಮಾರ್ಚ್ 17, 2045: ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY. ತಾನು ಯೋಚನಾ ಶಕ್ತಿಯನ್ನೇ ಕಳೆದುಕೊಂಡಿರುವೆನೆಂದು ಅವಳೊಬ್ಬಳಿಗೆ ಮಾತ್ರ ತಿಳಿದಿದೆ, ವಿಮರ್ಶೆಗೆ ಒಳಪಡಿಸುವ ತಾಳ್ಮೆ ಹೊರಟುಹೋಗಿದೆಯೆಂದೂ; ತನ್ನೆಲ್ಲಾ ನೆನಪುಗಳೂ ಗೋರಿಯಲ್ಲಿ ಮಲಗಿದ್ದರೂ ಒಂದು ನೆನಪು ಮಾತ್ರ ಎಂದಿಗೂ ಮಾಸಿ ಹೋಗದ ಹಚ್ಚೆಯ ರೀತಿಯಲ್ಲಿ ಗಟ್ಟಿಯಾಗಿ ಹೃದಯದ ಗೋಡೆಯ ಮೇಲೆ ಚಿತ್ರಿತವಾಗಿದೆ. ಆ ವ್ಯಕ್ತಿ, ಆ ಪ್ರೀತಿ, ಆ ನೆನಪು, ಒಂದೇ ಕನಸು. ಅವೆಲ್ಲವೂ ತನ್ನಿಂದ ಎಂದೋ ದೂರವಾಗಿವೆ ಎಂದು ಅರಿವಾಗಿದ್ದರೂ, ಈಗ ಅದು ಅನಂತದೆಡೆಗೆ ಹೆಜ್ಜೆಹಾಕಿದೆ ಎಂದು ಅವಳಿಗೂ ಗೊತ್ತಿದೆ. ಅವಳು ಅವನನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾಳೆ. ಇಂದಿಗೆ 20 ಸಂವತ್ಸರಗಳ ಹಿಂದೆ ಪೃಥ್ವಿಯ ಮೇಲೆ ಸುಂದರ ಹೂವೊಂದು ಅರಳಿದ ದಿನ. ಖುಷಿಯಿಂದಿರಬೇಕಾದ ದಿನವೇ 'ಪೃಥ್ವಿ'ಯ ಒಡೆಯನ ತಪ್ಪುಗಳಿಂದಾಗಿ ಜೀವನದಲ್ಲಿ ಸುನಾಮಿಯೊಂದು ಅಪ್ಪಳಿಸಿತ್ತು.
"ಇಂದಿನಿಂದ ನೀವಿಬ್ಬರೂ ಗಂಡ-ಹೆಂಡತಿಯರಾಗಿ ಉಳಿದಿರುವುದಿಲ್ಲ. ಈ ನ್ಯಾಯಾಲಯವು ನಿಮ್ಮ ವಿಚ್ಛೇದನಾ ಅರ್ಜಿಯನ್ನು ಸಮ್ಮತಿಸಿದೆ. ಪತಿಯ ಕಡೆಯಿಂದ ಪತ್ನಿಗೆ ಸೇರಬೇಕಾದ ಆಸ್ತಿಯನ್ನು 6 ತಿಂಗಳ ಒಳಗಾಗಿ ನೀಡಬೇಕೆಂದು ಈ ಮೂಲಕ ನ್ಯಾಯಾಲಯವು ಆದೇಶಿಸುತ್ತದೆ."- ನ್ಯಾಯಾಧೀಶರ ತೀರ್ಪಿನ ಮಾತುಗಳೇ ಇನ್ನೂ ಅವಳ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಈಗ ಅದು ಅಧಿಕೃತವಾಗಿದೆ. ಅವಳಿನ್ನು ಮುಂದೆ ಶ್ವೇತಾ ಶ್ರೀಧರ್ ಹೆಗಡೆ ಅಲ್ಲ.. ಮತ್ತೊಮ್ಮೆ ಶ್ವೇತಾ ರಾವ್ ಆಗಿದ್ದಾಳೆ.
ಅವನು ನೀಲಿ ಕಣ್ಣಿನ, ಮುದ್ದು ಚಂದ್ರನಂತಿರುವ ಮೊಗದ ಹುಡುಗ. ಒಕ್ಕಟ್ಟಿ ಮನೆತನದ, 'ಪೃಥ್ವಿ ಇಂಡಸ್ಟ್ರೀಸ್'ನ ಏಕೈಕ ವಾರಸುಧಾರ. ಸಾಗರ ಪಟ್ಟಣದಲ್ಲಿ ಎಲ್ಲ ಹುಡುಗಿಯರು ಅಪೇಕ್ಷಿಸುತ್ತಿದ್ದಂತಹ ಆಕರ್ಷಕ ಮೈಕಟ್ಟಿನ ರಾಜಕುಮಾರ. ಪತ್ರಿಕೆಯಲ್ಲಿ ಇವನ ಉನ್ನತ ವ್ಯವಹಾರಗಳ ಬಗ್ಗೆಯೇ ವಾರದಲ್ಲಿ 2-3 ಬಾರಿ ಬರುತ್ತಿತ್ತು. ವಿಧಿಲಿಖಿತವೋ ಅಥವಾ ಅವನ ಹಣೆಬರಹವೋ ಏನೋ..ಅವನಿಂದು ತನ್ನ ವಿಚ್ಚೇಧನಾ ಅರ್ಜಿಯ ಕೊನೆಯ ತೀರ್ಪನ್ನು ಪಡೆಯಲು ಬರಬೇಕಾಯಿತು. ಕೋರ್ಟಿನ ಹೊರಗಡೆ ಮಾದ್ಯಮದವರು ಕ್ಯಾಮರಾವನ್ನು ಜ಼ೂಮ್ ಮಾಡಿಟ್ಟುಕೊಂಡೇ ಅವನಿಗಾಗಿ ಕಾಯುತ್ತಾ ನಿಂತಿದ್ದರು. ದೊಡ್ಡವರು ಎನಿಸಿಕೊಂಡವರನ್ನು ತಮ್ಮ ಚಾನಲ್ಗಳಲ್ಲಿ ತೋರಿಸಿ, ಟಿ.ಆರ್.ಪಿ.ಯನ್ನು ಹೆಚ್ಚಿಸಿಕೊಳ್ಳುವ ಖಯಾಲಿ. ಆದ್ದರಿಂದ ಕೋರ್ಟಿನ ಹಿಂಬಾಗದಿಂದ ಪಾರಾಗಲು ನಿರ್ಧರಿಸಿದ್ದ. ಇದೇ ಕಾರಣಕ್ಕಾಗಿಯೇ ಗೋಗರೆಯುತ್ತಿದ್ದ ತಾಯಿಯನ್ನು ತನ್ನೊಂದಿಗೆ ಕರೆತಂದಿರಲಿಲ್ಲ. ಇಂದಿನಿಂದ ಅವನು ಏಕಾಂಗಿಯಾಗಿ ಜೀವನದ ಹಾದಿಯನ್ನು ಸವೆಸಬೇಕು... ಕೊನೆ ಉಸಿರು ಇರುವವರೆಗೂ... ಮುಖ್ಯವಾಗಿ ಅವಳಿಲ್ಲದೆ... ನಡೆಯಬೇಕು. ಕೆನ್ನೆಯ ಕಾಂತಿಗೆ ಚಂದ್ರನೇ ನಾಚುವಂತಿದ್ದ ಅಂದದ ಬೆಡಗಿ, ಪ್ರಶಾಂತವಾಗಿ ಎಲ್ಲಾ ನೋವುಗಳನ್ನು ಸಹಿಸಿಕೊಂಡು ಎಲ್ಲರಿಂದಲೂ ಆರಾಧಿಸಲ್ಪಡುವ, ತನಗೆ ಕೇಡು ಬಯಸಿದವನಿಗೂ ಒಳ್ಳೆಯದಾಗಲಿ ಎಂದು ಬೇಡುವ ನಿಷ್ಕಳಂಕ ಮನಸಿನ... ಎಲ್ಲಕ್ಕಿಂತ ಮುಖ್ಯವಾಗಿ ಅವನ ಜೀವನದಲ್ಲಿ ಪ್ರವೇಶಿಸಿದ ಅತ್ಯಂತ ಪ್ರಕಾಶಮಾನವಾದ ವಜ್ರ; ಶ್ವೇತಾ ಹೆಗಡೆಯ ಗಂಡನಾಗಿ ಇರುವುದು ಇಂದೇ ಕೊನೆಯ ದಿನ.
ಕೋರ್ಟಿನ ರೀತಿ-ರಿವಾಜುಗಳು ನಡೆಯುತ್ತಿದ್ದಾಗಲೂ ಅವಳೆಡೆಗೆ ಓರೆಗಣ್ಣಿನಿಂದ ನೋಡುತ್ತಲೇ ಇದ್ದ. ಅವನು miss ಮಾಡಿಕೊಳ್ಳುತ್ತಿದ್ದದ್ದು ಅವಳ ಹಣೆಯ ತುದಿಯಲ್ಲಿ, ಬೈತಲೆಯ ದಂಡೆಯ ಬಳಿ ಇಟ್ಟುಕೊಳ್ಳುತ್ತಿದ್ದ ಕೆಂಪು ಕುಂಕುಮವನ್ನು, ಸಣಕಲು ಕೈಗಳ ಸುತ್ತ ಇರುವ ಹಸಿರು ಬಳೆಗಳ ನಾದವನ್ನು, ಇವನ ದನಿ ಕೇಳಿ ಹೆದರಿದ ನೋಟ ಬೀರುತ್ತಿದ್ದ ಅವಳ ಕಂಗಳನ್ನು. ಆದರೆ ತೀರ್ಪು ಈಗ ಬಂದಾಗಿದೆ. ಅವಳಿನ್ನು ಅವನಿಗೆ ಸೇರಿದವಳಲ್ಲ. ಅವಳ ಮೇಲಿನ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡಿದ್ದಾನೆ. ಉಸಿರು ಕಟ್ಟಿದಂತಾಗುತ್ತಿದೆ. ನಾಲಿಗೆ ಒಣಗುತ್ತಿದೆ. ಕಣ್ಣು ಕಪ್ಪಡರುತ್ತಿದೆ. ದೃಷ್ಟಿ ಮಂಜಾಗುತ್ತಿದೆ. ಈ ಜಗತ್ತಿನ ಸಂತೋಷವನ್ನೆಲ್ಲಾ ಅನುಭವಿಸಲು ಅವಳು ಅರ್ಹಳಾಗಿದ್ದಳು. ಅವಳು ಯಾವ ತಪ್ಪು ಮಾಡಿದವಳಲ್ಲ. ತನಗೋಸ್ಕರವಾಗಿ ಅವಳನ್ನು ತನ್ನೊಂದಿಗಿರುವಂತೆ ಬಲವಂತವಾಗಿ ಇರಿಸಿಕೊಳ್ಳಲು ಸಾಧ್ಯವಿರಲಿಲ್ಲ, ಇಷ್ಟು ದಿನ ಮಾಡಿದಂತೆ. ಅಂತೂ ಅವಳು ಇವನ ಮುಷ್ಟಿಯಿಂದ ಪಾರಾಗಿದ್ದಳು. ತನ್ನ ಭಯವಿಲ್ಲದೆಯೇ ಅವಳಿನ್ನು ಖುಷಿಯಿಂದಿರಬಹುದು ಎಂದು ಯೋಚಿಸುತ್ತಾ ಮುಗುಳ್ನಕ್ಕ. ಅದಾಗ್ಯೂ ಆ ನಗು ಯಾರ ಕಿವಿಗೂ ಕೇಳಿಸುವಂತಿರಲ್ಲಿಲ್ಲ, ಕಣ್ಣಿಗೂ ಕಾಣಿಸುವಂತಿರಲಿಲ್ಲ. ಹೀಗೆ ತನ್ನದೇ ಚಿಂತೆಯಲ್ಲಿ ಮಗ್ನನಾಗಿ ದೂರದ ಮೂಲೆಯಲ್ಲಿ ಕಾಣುತ್ತಿದ್ದ ಮಾವಿನ ಮರದ ಕಡೆಗೆ ಹೆಜ್ಜೆ ಹಾಕ ತೊಡಗಿದ. ಶ್ವೇತಾ ಬೆಂಚಿನ ಮೇಲೆ ಕುಳಿತಿದ್ದು ಕಾಣಿಸಿತು. ಅವಳನ್ನು ಕೊನೆಯ ಬಾರಿ ಮಾತನಾಡಿಸಿ ಬರೋಣವೆಂದು ಒಂದು ಹೆಜ್ಜೆ ಎತ್ತಿಡುರುವುದರೊಳಗಾಗಿ ಅವಳ ಮುಂದೆ ಮೊಣಕಾಲೂರಿ ಕುಳಿತಿದ್ದ ಅವನು ಕಾಣಿಸಿದ.
ಆ ವ್ಯಕ್ತಿ ಯಾರು? ಅವನು ಶ್ವೇತಾಳಿಗೆ ಏನು ಹೇಳುತ್ತಿದ್ದಾನೆ?